ನೃತ್ಯಾಂಜಲಿ

img09
Facebooktwitterredditpinterestlinkedinmail

ಸ್ವಸ್ಥ ಜಗತ್ತನ್ನು ನಿರ್ಮಿಸುವಲ್ಲಿ ಭಾರತ ನೀಡಿದ ಅತ್ಯುತ್ತಮ ಕೊಡುಗೆ ಯೋಗ. ಇತ್ತೀಚಿನ ವರ್ಷಗಳಲ್ಲಿ ಇದು ಎಷ್ಟೊಂದು ಪ್ರಚಾರ ಪಡೆದಿದೆಯೆಂದರೆ ವಿದೇಶಿ ಪ್ರವಾಸಿಗರ ತಂಡ ಈ ವಿಜ್ಞಾನವನ್ನು ಅಭ್ಯಸಿಸಲಿಕ್ಕಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಂತಹ ಒಂದು ಗುಂಪು- ಶಿವರಾಮ ಅನ್ನುವ ಫ್ರಾನ್ಸ್ನಲ್ಲಿ ಜನಿಸಿ ಕೆನಡಾದಲ್ಲಿ ಬೆಳೆದ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯ ನೇತೃತ್ವದಲ್ಲಿ ಈಗ ಕುಂದಾಪುರದಲ್ಲಿ ಇದೆ. ಸುಮಾರು 24 ಮಂದಿ ಇರುವ (ಫ್ರಾನ್ಸ್, ಕೆನಡಾ, ಅಮೇರಿಕಾ, ಜಪಾನ್, ಟ್ಯುನೇಷಿಯಾ, ಬೆಲ್ಜಿಯಂ……) ಈ ಯೋಗ ರಿಟ್ರೀಟ್ ತಂಡಕ್ಕೆ ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಅತೀವ ಆಸಕ್ತಿ.
ಭಾರತೀಯ ಪರಂಪರೆಯನ್ನು ಉದ್ದೀಪನಗೊಳಿಸಲು ಸ್ಥಾಪಿಸಲ್ಪಟ್ಟ ಕುಂದಾಪುರದ ಸಾಧನಾ ಕಲಾ ಸಂಗಮ ಶ್ರೀ ನಾರಾಯಣ ಐತಾಳರ ನೇತೃತ್ವದಲ್ಲಿ, ಶಾಸ್ತ್ರೀಯ ಕಲೆಗಳನ್ನು ಮುಂದುವರೆಸುವ ಪ್ರಯತ್ನದಲ್ಲಿ ಒಳ್ಳೆಯ ಹೆಸರು ಮಾಡಿದೆ. ಶಾಸ್ತ್ರೀಯ ಗಾಯನ, ವಾದನ, ನರ್ತನಗಳಲ್ಲಿ ಪ್ರತಿಭೆಯನ್ನು ಹೊಂದಿರುವ ಶಿಕ್ಷಕರು/ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ. ಇವರ ಆಶ್ರಯದಲ್ಲಿ ಇತ್ತೀಚೆಗೆ ಮೇಲೆ ತಿಳಿಸಿದ ಯೋಗ ರಿಟ್ರೀಟ್ ತಂಡಕ್ಕೆ ಒಂದು ಭರತನಾಟ್ಯ ಕಾರ್ಯಕ್ರಮ ಸಂಸ್ಥೆಯ ನೃತ್ಯಗುರುಗಳಾದ ವಿದುಷಿ ಶಾಂಭವಿ ಆಚಾರ್ಯರಿಂದ ಆಯೋಜಿಸಲ್ಪಟ್ಟಿತು. ಇವರು ಉಡುಪಿ ಹೆಸರಾಂತ ನೃತ್ಯಗುರು ನಾಟ್ಯಮಯೂರಿ ಲಕ್ಷ್ಮೀ ಗುರುರಾಜ್ ಇವರ ಶೀಷ್ಯೆ.
ಪುಪ್ಪಾಂಜಲಿ ನೃತ್ಯದಿಂದ ಪ್ರಾರಂಭ- ಜೋಗ್ ರಾಗದ ಆದಿತಾಳದಲ್ಲಿ ನೃತ್ತಾಂಗ ದೇವರಿಗೆ, ಸಭೆಯ ದಿಕ್ಪಾಲಕರಿಗೆ, ಗುರುಗಳಿಗೆ, ಸಭೆಗೆ ಹಾಗೂ ರಂಗಸ್ಥಳಕ್ಕೆ ವಂದಿಸಿ ಆಶೀರ್ವಾದ ಪಡೆಯುವ ಮೂಲಕ ಶುರುವಾಯಿತು. ಇದು ನೃತ್ಯ ಕಾರ್ಯಕ್ರಮಕ್ಕೆ ಬೇಕಾದ ಉಠಾವ್ ನೀಡುವಲ್ಲಿ ಸಫಲವಾಯಿತು.
ಎರಡನೆಯ ನೃತ್ಯ ಗಣೇಶಸ್ತುತಿ ಮುತ್ತು ಸ್ವಾಮಿ ದೀಕ್ಷಿತರ ಕೃತಿಯನ್ನು ರಾಗ ಚಕ್ರವಾಕ/ಆದಿತಾಳದಲ್ಲಿ ವಿದುಷಿ ಅತ್ಯುತ್ತಮವಾಗಿ ಪ್ರಸ್ತುತಿ ಪಡಿಸಿದರು. ವಿಘ್ನನಾಶಕನ ಹಾವಭಾವಗಳನ್ನು ಯಥಾವತ್ತಾಗಿ ಅಭಿನಯಿಸಿದ ನರ್ತಕಿ ವಿದೇಶಿ ಅತಿಥಿಗಳ ಮನಸೂರೆಗೊಂಡರು.
ನಂತರ ದೇವಿಸ್ತುತಿ – ಸೃಷ್ಠಿ ಸ್ಥಿತಿ ಲಯಗಳ ಹಿಂದಿನ ಶಕ್ತಿ – ರಾಗಮಾಲಿಕಾ/ತಾಳಮಾಲಿಕಾದಲ್ಲಿ ನತರ್ಿಸಲ್ಪಟ್ಟಿತು. ದೇವಿಯ ಶಾಂತ, ಸಮ, ರೌದ್ರ ರೂಪಗಳೆಲ್ಲವೂ ಪ್ರದರ್ಶಿಸಲ್ಪಟು ನೃತ್ಯಗುರುವಿನ ಪ್ರತಿಭೆಗೆ ಸಾಕ್ಷಿಯಾಯಿತು.
ಮುಂದಿನ ನೃತ್ಯ ದಾಸರ ಪದ; ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮೋಕ್ಷ ಸಾಧನೆಗೆ ಭಕ್ತಿಮಾರ್ಗ ಶ್ರೇಷ್ಠವಾದದ್ದು. ದಾಸಶ್ರೇಷ್ಠ ಪುರಂದರ ದಾಸರ ಕೃತಿಯೊಂದು ರಾಗಮಾಲಿಕಾ/ಆದಿತಾಳದಲ್ಲಿ ಪ್ರದರ್ಶನಗೊಂಡಿತು. ಪುರಂದರ ವಿಠಲ ಅಂದರೆ ವಿಷ್ಣುವನ್ನು ಸ್ತುತಿಸುವ ಈ ಪದ್ಯ ಭಕ್ತಿಭಾವದಿಂದ ವ್ಯಕ್ತಗೊಂಡಿತು.
ಅಷ್ಟಪದಿಗಳೆಂದರೆ ಎಂಟು ಪಾದಗಳುಳ್ಳ ಹಾಡುಗಳು. ಅವುಗಳ ಪೈಕಿ ಜಯದೇವನ ಗೀತಗೋವಿಂದಕ್ಕೆ ಅಗ್ರಸ್ಥಾನ. ಭರತನಾಟ್ಯ ಕಚೇರಿ ಅಷ್ಟಪದಿಯ ವಿನಃ ಅಪೂರ್ಣ ಎಂಬಷ್ಟರ ಮಟ್ಟಿಗೆ ನಿರ್ಣಯವು ಬೆಳೆದಿದೆ. ರಾಧಾಮಾಧವರ ಸರಸ ಸಲ್ಲಾಪಗಳು, ಶೃಂಗಾರ ಭಾವಗಳಲ್ಲಿ ನಿರೂಪಿಸುವ ಸುಂದರವಾದ ಸಂಸ್ಕೃತ ಕಾವ್ಯ. ನೃತ್ಯದ ಸಂಚಾರಿಭಾವ, ಕಲಾವಿದೆಯ ಅಭಿನಯ ಪಾಂಡಿತ್ಯ- ಎಲ್ಲವೂ ರಾಗ ದರ್ಬಾರಿ/ಆದಿತಾಳದಲ್ಲಿ ಸೊಗಸಾಗಿ ಮೂಡಿಬಂತು. ಸಭೆಯನ್ನು ಒಂದು ದೈವಿಕ ಅನುಭೂತಿಗೆ ಕರೆದೊಯ್ಯಿತು ಅಂದರೂ ಅತಿಶಯೋಕ್ತಿಯಲ್ಲ.
ಕೊನೆಯದಾಗಿ ತಿಲ್ಲಾನ ಪರಿಚಯಿಸಲ್ಪಟ್ಟಿತು. ತಿಲ್ಲಾನವೆಂದರೆ ನಾದಲಯಗಳಿಂದ ಕೂಡಿದ ಸಂಗೀತಕ್ಕೆ ಸುಂದರ ಶಿಲ್ಪಭಂಗಿಗಳನ್ನು ಮತ್ತು ಶೊಲ್ಕಟ್ಟುಗಳನ್ನು ಅಳವಡಿಸಿ, ಶೀಘ್ರಗತಿಯಲ್ಲಿ ರೂಪಿಸುವ ರಚನೆ. ಇದು ಕಲಾವಿದೆ ತನ್ನ ವಿದ್ಯಾ ಸಂಪೂರ್ಣತೆ, ಪರಿಪೂರ್ಣತೆಯನ್ನು ಸೂಚಿಸುವ ಸಲುವಾಗಿ ಆಯ್ದುಕೊಂಡ ಅಂತಿಮವಾಗಿ ಶಾಂತರಸಕ್ಕೆ ತುಡಿಯುವ ನೃತ್ತಬಂಧ. ಇದನ್ನು ರಾಗ ಹಿಂದೋಳ/ಆದಿತಾಳದಲ್ಲಿ ಮಂಗಲಪ್ರದವಾಗಿ ವಿದುಷಿ ಶಾಂಭವಿ ಆಚಾರ್ಯ ನಿರೂಪಿಸಿದರು.
ಒಂದೂವರೆ ಗಂಟೆಗಳ ಕಾಲ ಎಲ್ಲರನ್ನೂ – ಮುಖ್ಯವಾಗಿ ವಿದೇಶಿ ಅತಿಥಿಗಳನ್ನು ಮಂತ್ರಮುಗ್ಧಗೊಳಿಸಿದ ಈ ಏಕವ್ಯಕ್ತಿ ಭರತನಾಟ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಕೇಳಿದಾಗ ಅವರ ಯೋಗಗುರು ಶಿವರಾಮ ಕಲಾವಿದೆಗೆ ಸಾಷ್ಟಾಂಗ ವಂದಿಸಿದ್ದು ಅವರು ಭಾರತೀಯ ಕಲೆಗೆ ಎಷ್ಟೊಂದು ಗೌರವ ನೀಡುತ್ತಾರೆ ಎಂಬುದನ್ನು ತೋರಿಸಿತು.
ಸಾಧನಾ ಕಲಾ ಸಂಗಮದ ಈ ಸ್ತುತ್ಯರ್ಹ ಪ್ರಯತ್ನ ಯಥೋಚಿತವಾಗಿ ಸಂಪೂರ್ಣ ಫಲಪ್ರದವೆನಿಸಿತು.
ಡಾ| ಎಚ್. ರಾಘವೇಂದ್ರ ಹೆಬ್ಬಾರ್
ಮಕ್ಕಳ ತಜ್ಞರು, ಕುಂದಾಪುರ
9480657535

ಸಂಬಂಧಿಸಿದ ಕಾರ್ಯಕ್ರಮಗಳು

Sangeetha Lahari
2023
ಗಜವರ್ಣ 2022
2022

ಸಾಧನಾ ಕಲಾ ಸಂಗಮವು 2009 ರಲ್ಲಿ ಪ್ರಾರಂಭವಾದಂದಿನಿಂದ ನಿರಂತರ ವಾಗಿ ನಡೆಸಿಕೊಂಡು ಬಂದಿರುವ ಬಹು ಮುಖ್ಯ ಚಟುವಟಿಕೆಯಲ್ಲಿ ಒಂದಾದ “ಗಜವರ್ಣ” ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ.ಇದು ಪ್ರತಿ ವರ್ಷ ಗಣೇಶ ಚೌತಿಯಾ ಸಂದರ್ಭದಲ್ಲಿ ನಡೆಯುವಂತಹ ಸ್ಪರ್ಧೆ. ಆದಾರೆ ಈ ಬಾರಿ ಗಣಪತಿ ಚಿತ್ರ ರಚನೆಯನ್ನು ನಿಮ್ಮ ಮನೆಯಲ್ಲಿ ರಚಿಸಿ ನಮಗೆ ತಲುಪಿಸಬೇಕು

ಇನ್ನೂ ಇದೆ
ಶ್ರೀ ಮದ್ಭಗವದ್ಗೀತೆಯ ತರಗತಿಗಳು
2022